ತಿರುಪತಿ ವೇಂಕಟ ಕವಿಗಳು -
	ತೆಲುಗಿನ ಸಹಕರ್ತೃಗಳಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ ದಿವಾಕರ ತಿರುಪತಿ ಶಾಸ್ತ್ರ (1871-1919) ಮತ್ತು ಚೆಳ್ಳ ಪಿಳ್ಳ ವೇಂಕಟಶಾಸ್ತ್ರಿ (1870-1950)-ಇವರಿಬ್ಬರನ್ನೇ ತೆಲುಗಿನವರು ಈ ಹೆಸರಿನಿಂದ ಕರೆಯುತ್ತಾರೆ. ತೆಲಗು ಭಾಷೆಯಲ್ಲಿ ಸಹಕರ್ತೃತ್ವವೆಂಬ ಸಂಪ್ರದಾಯ ಬಹಳ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿದೆ. ಒಂದೇ ಗ್ರಂಥವನ್ನು ಇಬ್ಬರು. ಮೂವರು ಸೇರಿ ಬರೆಯುವುದನ್ನು ಎಲ್ಲ ಭಾಷೆಗಳಲ್ಲೂ ನಾವು ಈಗ ಕಾಣುತ್ತೇವೆ. ಪ್ರಬೋಧಚಂದ್ರೋದಯಮು, ವರಾಹ ಪುರಾಣಮು ಎಂಬ ಗ್ರಂಥಗಳನ್ನು ಬರೆದ ನಂದಿಮಲ್ಲಯ, ಘಂಟಸಿಂ ಗಯ (15ನೆಯ ಶತಮಾನ) ಎಂಬುವರ ಕಾಲದಿಂದ ಈ ಸಹಕರ್ತೃತ್ವ ತೆಲುಗಿನಲ್ಲಿ ನಡೆದುಕೊಂಡು ಬಂದಿದೆ. 

	ಅದ್ಯತನಾಂಧ್ರಕವಿ ಪ್ರಪಂಚ ನಿರ್ಮಾತಗಳೆಂದು ಈ ಇಬ್ಬರು ಕವಿಗಳನ್ನು ಅವರ ಶಿಷ್ಯರಾದ ಪಿಂಗಳಿ ಲಕ್ಷ್ಮೀಕಾಂತಂ, ಕಾಟೂರಿ ವೆಂಕಟೇಶ್ವರರಾವುಗಳು ಭಕ್ತಿಯಿಂದ ಹೆಸರಿಸುವುದರಲ್ಲಿ ಒಂದು ಅರ್ಥವಿದೆ. ಏಕೆಂದರೆ ಇಂದಿನ ಮಹಾ ಪಂಡಿತರಾಗಲಿ ಅಧ್ಯಾಪಕರಾಗಲಿ ನೇರವಾಗಿಯೋ ಬೇರೆ ವಿಧವಾಗಿಯೋ ಈ ಇಬ್ಬರು ಕವಿಗಳ ಶಿಷ್ಯರಾಗಿದ್ದಾರೆ. ಇವರ ಶಿಷ್ಯಕೋಟಿ ಆಂಧ್ರದಲ್ಲೆಲ್ಲ ಹರಡಿಕೊಂಡಿದೆ. 

	ತಿರುಪತಿಶಾಸ್ತ್ರಿಗಳು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 1871ರಲ್ಲಿ. ವೆಂಕಟಶಾಸ್ತ್ರಿಗಳು ಪೂರ್ವ ಗೋದಾವರಿ ಜಿಲ್ಲೆಯಲ್ಲಿ 1870ರಲ್ಲಿ ಹುಟ್ಟಿದರು. ಕಾಶಿಯಲ್ಲಿ ವ್ಯಾಕರಣ ಶಾಸ್ತ್ರವನ್ನು ಅಧ್ಯಯನ ಮಾಡಿ ಬಂದಿದ್ದ ಚರ್ಲ ಬ್ರಹ್ಮಯ್ಯಶಾಸ್ತ್ರಗಳಿಂದ ಇಬ್ಬರೂ ಆ ಶಾಸ್ತ್ರವನ್ನು ಅಭ್ಯಾಸ ಮಾಡಿ ಆ ಕಾಲದಲ್ಲೇ ಸಹಕೃರ್ತಗಳಾದರು. ಯಾವಾಗಲೂ ಇಬ್ಬರೂ ಕೂಡಿಯೇ ರಚನೆ ಮಾಡುವುದು. ಒಂದು ವೇಳೆ ಒಬ್ಬರೇ ಬರೆದರೂ ಅದು ಇಬ್ಬರ ರಚನೆ ಎಂದೇ ಬಳಕೆಗೆ ಬರಬೇಕು- ಎಂಬುದು ಅವರಿಟ್ಟುಕೊಂಡ ನಿಯಮ. 

	ಇವರು ಮೊದಲು ಸಂಸ್ಕøತದಲ್ಲಿ ಆಮೇಲೆ ಕೇವಲ ತೆಲುಗುನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆÀ. ರಾಮಾಯಣ ಕಥೆಯನ್ನೊಳಗೊಂಡು ಪಾಣಿನೀಯ ಧಾತುರೂಪಗಳಿಗೆ ಪ್ರಯೋಗರೂಪವಾಗಿರುವಂತೆ ಧಾತುರತ್ನಾಕರ ಎಂಬ ಒಂದು ಚಂಪೂ ಗ್ರಂಥ ಇವರ ಮೊದಲ ರಚನೆ. ಅನಂತರ ಇವರು ಶೃಂಗಾರ ಶೃಂಗಾಟಕವೆಂಬ ವೀಥಿ ನಾಟಕವನ್ನು ಸಂಸ್ಕøತದಲ್ಲಿ ರಚಿಸಿದರು. ಇವರ ಇನ್ನೂ ಕೆಲವು ಚಿಕ್ಕ ಪುಟ್ಟ ಗ್ರಂಥಗಳು ಸಂಸ್ಕøತದಲ್ಲಿವೆ. 

	ಈ ಕವಿಗಳನ್ನು ತೆಲುಗಿನವರು ಮುಖ್ಯವಾಗಿ ಸ್ಮರಿಸುವುದು ಇವರ ಅಷ್ಟಾವಧಾನ ಮತ್ತು ಶತಾವಧಾನಗಳೆಂಬ ಸಾಹಿತ್ಯ ಪ್ರದರ್ಶನಗಳಿಗಾಗಿ. ಸಹಜವಾಗಿಯೇ ಮಹಾಕವಿಗಳಾದುದರಿಂದ ಇವರ ಪದ್ಯಗಳು ಹೆಚ್ಚಾಗಿ ಎಲ್ಲರ ಮೆಚ್ಚಿಕೆಯನ್ನು ಪಡೆಯುವಂಥವಾಗಿರುತ್ತಿದ್ದುವು. ಸಮಸ್ಯಾಪೂರಣವೆಂಬುದು ಅವಧಾನದಲ್ಲಿ ಬಹಳ ಕಷ್ಟದಿಂದ ಕೂಡಿದ್ದು. ದುಷ್ಕರ ಪ್ರಾಸದಿಂದ ಕೂಡಿದ ಪದ್ಯ ಪಾದಗಳನ್ನೂ ಇವರು ನಿರಾಯಾಸದಿಂದ ಪೂರೈಸುತ್ತಿದ್ದರು. 

	ಈ ಕವಿಗಳು ಅಂದು ಆಂಧ್ರದೇಶದ ಸಂಸ್ಥಾನಗಳನ್ನು ಆಳುತ್ತಿದ್ದ ರಾಜರಿಂದ ಅನೇಕ ಸನ್ಮಾನಗಳನ್ನು ಪಡೆದರು. ಅರಸರನ್ನು ಕಂಡಾಗ ಅವರು ಹೇಳಿದ ಅನೇಕ ಪದ್ಯಗಳ ಸಂಪುಟ ನಾನಾ ರಾಜಸಂದರ್ಶನಮು ಎಂಬ ಹೆಸರಿನಲ್ಲಿ ಪ್ರಕಟಗೊಂಡಿದೆ. ನೀವು ರಾಜರಾದರೆ ನಾವು ಕವಿರಾಜರೆಂದು ಧೈರ್ಯವಾಗಿ ಹೇಳಬಲ್ಲವರಾಗಿದ್ದ ಈ ಕವಿಗಳು ತಮ್ಮಿಂದ ಯಾವ ಲಾಭವನ್ನೂ ಪಡೆಯದೆ ಯಾರಾದರೂ ಸನ್ಮಾನ ಮಾಡಿದರೆ ನೇರವಾಗಿ ನಿರಾಕರಿಸುತ್ತಿದ್ದರು. ತಕ್ಕ ಸನ್ಮಾನ ಮಾಡದವರನ್ನು ಕಟುವಾಗಿ ಟೀಕಿಸುವುದಕ್ಕೂ ಅವರು ಹಿಂಜರಿಯುತ್ತಿರಲಿಲ್ಲ.

	ಇವರ ರಚನೆಯಲ್ಲಿ ಅನಂತ ವೈವಿಧ್ಯವಿದೆ. ಸಂಸ್ಕøತದಿಂದ ಅನುವಾದಗೊಂಡ ಇವರ ಗ್ರಂಥಗಳಲ್ಲಿ ದೇವೀಭಾಗವತ, ಬುದ್ಧಚರಿತ್ರಮು ಮುಖ್ಯವಾದವು. ದೇವೀಭಾಗವತ ಇವರ ಗುರುವಾಗಿದ್ದ ಚರ್ಲ ಬ್ರಹ್ಮಯ್ಯಶಾಸ್ತ್ರಿಗಳಿಗೆ ಸಮರ್ಪಿತವಾಗಿದ್ದು ಸರಳ ಸುಂದರವಾದ ರಚನೆಯಾಗಿದೆ. ಹೆಸರಿಗೆ ಅನುವಾದವಾದರೂ ಪ್ರತ್ಯಕ್ಷರ ಅನುವಾದವಾಗಿದೆ. ಬುದ್ಧ ಚರಿತ್ರಮು ಎಂಬುದಂತೂ ಅನುವಾದ ಕಾವ್ಯಗಳಲ್ಲಿ ಅತ್ಯಂತ ವಿಶಿಷ್ಟವಾದುದು. ಇದು ಮುಖ್ಯವಾಗಿ ಎಡ್ವಿನ್ ಆರ್ನಲ್ಡ್‍ನ ಲೈಟ್ ಆಫ್ ಏಷ್ಯ ಅನುಸರಿಸಿ ಬರೆದುದಾಗಿದೆ. ಸಂಸ್ಕøತದ ಅಶ್ವಘೋಷನ ಬುದ್ಧ ಚರಿತ್ರೆಯಿಂದಲೂ ಕ್ಷೇಮೇಂದ್ರನ ಬುದ್ಧ ಜನ್ಮ ಕಾವ್ಯದಿಂದಲೂ ಇವರು ಅನೇಕ ವಿಷಯಗಳನ್ನು ಗ್ರಹಿಸಿರುತ್ತಾರೆ.

	ಈ ಕವಿಗಳ ಸ್ವತಂತ್ರ ಕಾವ್ಯಗಳಲ್ಲಿ ಪ್ರಧಾನವಾದುದು ಶ್ರವಣಾನಂದಮು. ಇದು ಐದು ಆಶ್ವಾಸನಗಳ ಶೃಂಗಾರ ಹಾಗೂ ನೀತಿಪ್ರಧಾನವಾದ ಮಹಾಕಾವ್ಯ. ನಾಯಕ ಮಧುಸೂದನ. ನಾಯಿಕೆ ಬಾಲಾಮಣಿ ಎಂಬ ವೇಶ್ಯೆ. ವೇಶ್ಯಾಲೋಲರಾಗಿರುವವರಿಗೆ ಸಂದೇಶ ನೀಡುವ ಉದ್ದೇಶದಿಂದ ಇದು ರಚಿಸಲ್ಪಟ್ಟಿದೆ. ಇವರದೇ ಇನ್ನೊಂದು ಸಾಮಾಜಿಕ ಮಹಾಕಾವ್ಯ ಪಾಣಿಗೃಹೀತ. ಇದರಲ್ಲೂ ಜಲಜಾಕ್ಷಿ ಎಂಬ ವೇಶ್ಯೆ ನಾಯಿಕೆ. ವಿವಾಹಿತೆಯಾದ ಸತಿಗೆ ಪಾಣಿಗೃಹೀತೆ ಎಂದು ಹೆಸರು. ತಾನೇ ಬಲಾತ್ಕಾರವಾಗಿ ಪಾಣಿಯನ್ನು ಗ್ರಹಿಸುವ ವೇಶ್ಯೆಯನ್ನು ಶಾಬ್ದಿಕಾಗ್ರಹಿಣಿಗಳು ಪಾಣಿಗೃಹೀತ ಎನ್ನುವರೆಂದು ಇಲ್ಲಿ ಹೇಳಲಾಗಿದೆ. ಲಕ್ಷಣಾಪರಿಣಯವೆಂಬುದು ಆಶುವಾಗಿ ಹೇಳಲ್ಪಟ್ಟ ಮೂರು ಆಶ್ವಾಸಗಳ ಕಾವ್ಯ, ಶ್ರೀಕೃಷ್ಣ ಲಕ್ಷಣ ಎಂಬವಳನ್ನು ಮದುವೆಯಾಗುವ ಕಥೆ. ಏಲಾಮಹಾತ್ಮೆ ಮುಂತಾದವು ಇವರ ಇತರ ಕಾವ್ಯಗಳು.

	ಅಧಿಕ್ಷೇಪ (ವಿಡಂಬನಾತ್ಮಕ) ಕಾವ್ಯಗಳಿಗೂ ಈ ಕವಿಗಳು ತೆಲಗಿನಲ್ಲಿ ಬುನಾದಿ ಹಾಕಿರುತ್ತಾರೆ. ಗೀರತಮು ಎಂಬುದು ತೆಲುಗಿನಲ್ಲಿರುವ ಒಳ್ಳೆಯ ಅಧಿಕ್ಷೇಪ ಕಾವ್ಯ. ಕೋಕಿಲಕಾಕಮು, ಶೃಂಗಭಂಗಮು ಎಂಬುವೂ ಅಧಿಕ್ಷೇಪ ಗ್ರಂಥಗಳೇ. ಗುಂಟೂರು ಸೀಮ ಎಂಬುದು ಇವರಿಗೂ ಕೊಪ್ಪರಪು ಕವಿಗಳು ಎಂಬುವರಿಗೂ ನಡೆದ ವಾಗ್ವಾದವನ್ನು ತಿಳಿಸುವ ಕಾವ್ಯ. ಇವಲ್ಲದೆ ಬಿಡಾಲೋಪಾಖ್ಯಾನಮು, ಶನಿಗ್ರಹಮು, ಗ್ರಾಮಸಿಂಹಮು, ವ್ಯಾಸ ನಿಷ್ಟಾಸನಮು, ರಾಸಭ ಕುಮಾರುಡು - ಮುಂತಾದ ಅನೇಕ ಅಧಿಕ್ಷೇಪ ಕಾವ್ಯಗಳು ಇವರ ರಚನೆಗಳಾಗಿವೆ.

	ನಾಟಕಕಾರರಾಗಿಯೂ ಇವರು ಬಹಳ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರದು ಒಟ್ಟು ಹದಿನೆಂಟು ನಾಟಕಗಳು. ಮೂರು ಸಂಸ್ಕøತದಿಂದ ಅನುವಾದಗೊಂಡವು. ಹನ್ನೊಂದು ಪೌರಾಣಿಕ. ಎರಡು ಐತಿಹಾಸಿಕ, ಎರಡು ಸಾಮಾಜಿಕ. ಕೆಲವು ಪ್ರಹಸನಗಳೂ ಇವೆ. ರಾಜಶೇಖರನ ಬಾಲರಾಮಾಯಣ, ವಿಶಾಖದತ್ತನ ಮುದ್ರಾರಾಕ್ಷಸ, ಮೃಚ್ಛಕಟಿಕ - ಇವು ಅನುವಾದ ನಾಟಕಗಳು.  ಪಾಂಡವರನ್ನು ಕುರಿತೇ ಇವರು 6 ನಾಟಕಗಳನ್ನು ಬರೆದಿದ್ದಾರೆ. ಇವರ ಅತ್ಯಂತ ಪ್ರಸಿದ್ಧ ನಾಟಕವೆಂದರೆ ಪಾಂಡವೋದ್ಯೋಗ ವಿಜಯಮುಲು. ಎಡ್ವರ್ಡು ಪಟ್ಟಾಭಿಷೇಕ - ಎಂಬುದು ಇವರ ಒಂದು ನಾಟಕ.

	ಭಾರತವೀರುಲು, ಕಥಲುಗಾಥಲು ಮುಂತಾದುವು ವಚನರಚನೆಗಳು.

	ಒಟ್ಟಿನಲ್ಲಿ ಇವರ ಸಾಹಿತ್ಯದಲ್ಲಿ ಅನುವಾದಗಳು, ಸ್ವತಂತ್ರ ಕಾವ್ಯಗಳು, ನಾಟಕಗಳು, ವಿಮರ್ಶಾ ಗ್ರಂಥಗಳು ಇವೆ. ಪ್ರತಿಭಾ ವ್ಯುತ್ಪತ್ತಿ ಅಭ್ಯಾಸಗಳಿಂದ ಸುಮಾರು ಅರ್ಧಶತಮಾನ ತೆಲಗು ದೇಶದಲ್ಲಿ ಪ್ರಸಿದ್ಧರಾಗಿ ಮೆರೆದು ತರುಣ ಪೀಳಿಗೆ ಅನೇಕ ಕವಿ, ಪಂಡಿತರಿಗೆ ತಿರುಪತಿ ವೇಂಕಟ ಕವಿಗಳು ಸ್ಪೂರ್ತಿಯನ್ನು ಕೊಟ್ಟಿದ್ದಾರೆ.	                 (ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ